ವೆಂಕಟಪತಿ 1

	ವಿಜಯನಗರದ ಆರವೀಡು ವಂಶದ ರಾಜ (ಸು. 1586-1614). ಒಂದನೆಯ ಶ್ರೀರಂಗನ ತಮ್ಮ. ಶ್ರೀರಂಗನಿಗಿಂತ ಮೊದಲೇ ಅವನ ಸೋದರ ರಾಮದೇವ ನಿಧನನಾಗಿದ್ದ. ರಾಮದೇವನ ಮಕ್ಕಳು ಪ್ರಾಪ್ತವಯಸ್ಕರಾಗಿರಲಿಲ್ಲ. ಆದ್ದರಿಂದ ಶ್ರೀರಂಗನ ತಮ್ಮನಾದ ವೆಂಕಟಪತಿದೇವನೇ ಮಂತ್ರಿ, ಸಾಮಂತರ ಒಪ್ಪಿಗೆಯಿಂದ ಕಿರೀಟಧಾರಣೆ ಮಾಡಿಕೊಂಡ (ಸು 1586). ಪೆನುಕೊಂಡ ಇವನ ರಾಜಧಾನಿಯಾಗಿತ್ತು.

	ಇವನ ಆಳಿಕೆಯ ಕಾಲದಲ್ಲಿ ಗೋಲ್ಕೊಂಡದ ಕುತುಬ್ ಷಾ ಅಪಾರ ಸೇನೆಯೊಡನೆ ಬಂದು ಪೆನುಕೊಂಡೆಗೆ ಮುತ್ತಿಗೆ ಹಾಕಿದ. ವೆಂಕಟಪತಿ ಸಂಧಾನದ ಮಾತುಕತೆಯಾಡುವಂತೆ ನಟಿಸುತ್ತಲೇ ಇದ್ದು, ಸೈನ್ಯ ಸಜ್ಜೀಕರಣ ಮಾಡತೊಡಗಿದ. ಕುತುಬ್ ಷಾ ಮುತ್ತಿಗೆ ಮುಂದುವ ರಿಸಿದ. ಆದರೆ ವಿಜಯನಗರದ ಸೇನೆಗಳ ಮುಂದೆ ಅವನ ಆಟ ನಡೆಯದಾಯಿತು. ವೆಂಕಟಪತಿಯ ಸೇನೆಗಳು ವೈರಿಯ ಸೈನ್ಯರಾಶಿಯನ್ನು ತೊತ್ತಳ ತುಳಿದು, ಗೋಲ್ಕೊಂಡದ ಸೀಮೆಯವರೆಗೂ ಬೆನ್ನಟ್ಟಿದುವು. ವಿಜಯನಗರದ ವಿಜಯಭೇರಿಯಿಂದ ಉತ್ತೇಜಿತರಾದ ನೆರೆಯ ನಾಯಕರು ಗೋಲ್ಕೊಂಡದ ವಿರುದ್ಧ ಬಂಡಾಯ ಕೈಕೊಂಡು, ವಿಜಯನಗರದ ಅಧಿರಾಜತೆಯನ್ನು ಒಪ್ಪಿಕೊಂಡರು. ಈ ಯುದ್ಧಗಳಲ್ಲಿ ವೆಂಕಟಪತಿ ದೇವನ ಸೇನಾನಿ ಮಾಟ್ಲೆ ಅನಂತ ಅತಿಶಯಪರಾಕ್ರಮ ತೋರಿದ. ಸೋತ ಕುತುಬ್ ಷಾ ಸಂಧಿಯಾಚನೆ ಮಾಡಿದ. ವೆಂಕಟಪತಿದೇವ ಕೊಂಡವೀಡನ್ನು ಗೋಲ್ಕೊಂಡಕ್ಕೆ ಬಿಟ್ಟುಕೊಟ್ಟು, ಕೃಷ್ಣಾನದಿ ವಿಜಯನಗರದ ಉತ್ತರದ ಗಡಿಯಾಗಲು ಒಪ್ಪಿದ.

	ಈ ನಡುವೆ ಬಿಜಾಪುರದ ಇಬ್ರಾಹೀಂ ಆದಿಲ್ ಷಾ ಪಶ್ಚಿಮ ಪ್ರಾಂತಗಳಲ್ಲಿ ಕಿರುಕುಳ ಕೊಡತೊಡಗಿದ. ವೆಂಕಟಪತಿದೇವ ಅವನ ವಿರುದ್ಧವಾಗಿ ನಿಜಾಮ್ ಷಾನೊಡನೆ ಸಂಧಾನ ಮಾಡಿಕೊಂಡ. ಆದಿಲ್ ಷಾ ಪೆನುಕೊಂಡೆಯ ಮೇಲೇರಿ ಬಂದ. ಆದರೆ ಸೋತು ಮುತ್ತಿಗೆ ತೆಗೆದು ಪಲಾಯನ ಮಾಡಿದ. ಇಷ್ಟಾಗುವ ಹೊತ್ತಿಗೆ ದಕ್ಷಿಣ ದಂಡಯಾತ್ರೆಗೆ ಹೊರಟಿದ್ದ ಮೊಗಲ್ ಸಾಮ್ರಾಟ ಅಕ್ಬರ್ ವೆಂಕಟಪತಿದೇವನಲ್ಲಿಗೆ ರಾಯಭಾರಿಗಳನ್ನು ಕಳುಹಿಸಿದ. ಆದರೆ ಈತ ರಾಯಭಾರವನ್ನು ಮನ್ನಿಸದೆ ಹಿಂದೆ ಕಳುಹಿಸಿದ. ಈ ನಡುವೆ ಇವನ ಸಾಮ್ರಾಜ್ಯದೊಳಗೆ ಹಲವು ಮಾಂಡಲಿಕರು ಬಂಡಾಯ ಹೂಡತೊಡ ಗಿದರು. ಉತ್ತರಮೇರೂರಿನಲ್ಲಿ ನಡೆದ ಸಮರದಲ್ಲಿ ವೇಲುಗೋಟಿ ಏಚವ ನಾಯಕನೂ ತಿಮ್ಮಯ್ಯ ಮಂತ್ರಿಯೂ ತಂಜಾವೂರಿನ ರಘುನಾಥನಾಯಕನೂ ಈ ಬಂಡಾಯಗಳನ್ನು ತಗ್ಗಿಸಲು ರಾಯನಿಗೆ ನೆರವಾದರು.

	ಈ ಕಾಲಕ್ಕೆ ಪೋರ್ಚುಗೀಸ್, ಡಚ್, ಇಂಗ್ಲಿಷ್ ಮುಂತಾದ ವಿದೇಶಿ ಪ್ರಭುಗಳು ದಕ್ಷಿಣ ಭಾರತದಲ್ಲಿ ತಮ್ಮ ಅಧಿಕಾರ ಸ್ಥಾಪನೆಗೆ ಯತ್ನಿಸುತ್ತಿದ್ದರು. 1608ರಲ್ಲಿ ಜಿಂಜಿಯ ಕೃಷ್ಣಪ್ಪನಾಯಕನಿಂದ ಡಚ್ಚರು ಕಡಲೂರು ಬಳಿ ಕೋಟೆ ಕಟ್ಟಲು ಅನುಮತಿ ಪಡೆದರು. ವೆಂಕಟಪತಿ ಇದರಿಂದ ಅಸಮಾಧಾನಗೊಂಡು ಡಚ್ಚರನ್ನು ಅಲ್ಲಿಂದ ಹೊರಡಿಸುವಂತೆ ನಾಯಕನಿಗೆ ನಿರೂಪ ಕಳುಹಿಸಿದ. ಅದನ್ನು ನಾಯಕ ತಿರಸ್ಕರಿಸಿದ. ಮತ್ತೊಮ್ಮೆ ವೆಂಕಟಪತಿ ಆಗ್ರಹಪೂರ್ವಕವಾಗಿ ನಿರೂಪ ಕಳುಹಿಸಿದಾಗ ನಾಯಕ ಒಪ್ಪಿದ. 1609ರಲ್ಲಿ ಡಚ್ಚರು ಇನ್ನಷ್ಟು ಉತ್ತರಕ್ಕೆ ಪುಲಿಕಾಟ್‍ನಲ್ಲಿ ನೆಲೆಯೂರಿದರು. ಪೋರ್ಚುಗೀಸರು ಪುಲಿಕಾಟ್ ಪಾಳ್ಯವನ್ನು ಧ್ವಂಸ ಮಾಡಿದರೂ ಮತ್ತೆ ವೆಂಕಟಪತಿಯ ಬೆಂಬಲದಿಂದ ಅದನ್ನು ವಶಪಡಿಸಿಕೊಂಡರು. ಪುಲಿಕಾಟ್‍ನಲ್ಲಿ ನೆಲೆ ಪಡೆಯಲು ಇಂಗ್ಲಿಷರು ಯತ್ನಿಸಿ ವಿಫಲರಾದರು.

	ವೆಂಕಟಪತಿದೇವ ಆರವೀಡು ಕುಲದ ಅತ್ಯಂತ ಪ್ರಸಿದ್ಧ ರಾಜ. ಇವನ ಆಳಿಕೆ ಪ್ರಜಾರಂಜಕವಾಗಿ, ಸರ್ವಧರ್ಮ ಸಮನ್ವಯಕ್ಕೆ ಹೆಸರಾಗಿತ್ತು. ಸಾಹಿತ್ಯ ಕಲೆಗಳಿಗೆ ಉದಾರಾಶ್ರಯ ನೀಡಿ, ವಿಜಯನಗರದ ಗತವೈಭವವನ್ನು ಬಹುಮಟ್ಟಿಗೆ ಪುನಃ ಗಳಿಸಿದ. ಕೃಷ್ಣದೇವ ರಾಯನ ಸುವರ್ಣಯುಗವನ್ನು ಇವನ ಕಾಲ ನೆನಪಿಗೆ ತರುವಂತಿತ್ತು. ಆದರೆ ತಾಳಿಕೋಟೆಯ ಯುದ್ಧಾನಂತರ ತಲೆದೋರಿದ ಶೈಥಿಲ್ಯದಿಂದ ಹಲವಾರು ವಿಚ್ಛಿದ್ರಕಾರಕ ಶಕ್ತಿಗಳು ಬಲಿತು, ಸಾಮ್ರಾಜ್ಯದ ಸರ್ವನಾಶಕ್ಕೆ ಕಾರಣವಾದುವು. ಈತ 1614 ಅಕ್ಟೋಬರ್‍ನಲ್ಲಿ ನಿಧನನಾದ.							
		(ಎಮ್.ಕೆ.ಬಿ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ